ಕನತ್ ನೀರಾವರಿ ವ್ಯವಸ್ಥೆ : ಮರುಭೂಮಿ ಪ್ರದೇಶಗಳಲ್ಲಿ ನೆಲದಡಿಯ ನೀರನಾಳಗಳನ್ನು ತಲುಪಿ ಅವುಗಳ ಜಾಡನ್ನು ಅನುಸರಿಸಿ ಸುರಂಗಗಳನ್ನು ಕೊರೆದು ನೀರನ್ನು ಸಂಗ್ರಹಿಸಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ವಿಧಾನ. ಮೊದಲು ಮೂಲ ಬಾವಿ ತೋಡಿ
ನೀರನಾಳವನ್ನು ತಲುಪುತ್ತಾರೆ. ಅಲ್ಲಿಂದ ನೀರು ಬೇಕಾಗಿರುವ ಸ್ಥಳಕ್ಕೆ (ವ್ಯವಸಾಯ ಪ್ರದೇಶ ಇಲ್ಲವೇ ಜನವಸತಿ) ಭೂಮಿಯ ಒಳಗಡೆಯಿಂದಲೇ ಸಮಾನಾಂತರ ಸುರಂಗಗಳನ್ನು ಇಳಿಜಾರಾಗಿರುವಂತೆ ನಿರ್ಮಿಸಿ ನೀರನ್ನು ಬೇಕಾದೆಡೆಗೆ ಹರಿಸುತ್ತಾರೆ. ಇಂಥ ಸುರಂಗಗಳ ಉದ್ದ 25-30 ಕಿಮೀಗಳ ವರೆಗೂ ಇರುವುದುಂಟು. ಇವೇ ನೀರುಸಾಗಾಣಿಕೆಯ ಕಾಲುವೆಗಳಾಗುತ್ತವೆ. ಜಿನುಗುವ ನೀರು ಸಹ ಇವುಗಳಲ್ಲಿ ಸಂಗ್ರಹವಾಗುವುದು. ಸುರಂಗಗಳಿಗೆ ಸಮಾನಾಂತರ ಬಾವಿಗಳೆಂದೂ ಹೆಸರಿದೆ. ಇವುಗಳಿಂದ ನೆಲಮಟ್ಟ ತಲುಪಲು ಸಾಲಾಗಿ ಲಂಬವಾಗಿರುವ ಕೊಳವೆಗಂಬಗಳು ಅಥವಾ ತೋಡುದಾರಿ ಗಳನ್ನು ನಿರ್ಮಿಸುತ್ತಾರೆ. ಇವುಗಳ ಮುಖಾಂತರ ಒಳಗೆ ಅಗೆದ ಮಣ್ಣನ್ನು ಹೊರಕ್ಕೆ ಸಾಗಿಸಬಹುದು ಮತ್ತು ಆಗಾಗ ಕೆಲಸಗಾರರು ಒಳಗೆ ಇಳಿದು ಕಾಲುವೆಗಳನ್ನು ಶುದ್ಧೀಕರಿಸಬಹುದು. ಸುರಂಗಗಳನ್ನು ಕೊರೆಯುವಾಗ ಪೊಳ್ಳುಗುಹೆಗಳು ಸಿಕ್ಕಿದಲ್ಲಿ ಕನತ್ ನೀರಾವರಿ ವ್ಯವಸ್ಥೆಯೇ ನಾಶವಾಗುತ್ತದೆ. ಅನೇಕ ಕಡೆಗಳಲ್ಲಿ ಹಾಗೆ ಆದದ್ದೂ ಉಂಟು. ಮೂಲಬಾವಿಯ ಕೆಳಭಾಗದಲ್ಲಿ ಸೋಸುವ ಕಂಬದ ಸಾಲುಹಾದಿಯ ವೇದಿಕೆಗಳಿವೆ (ಇನ್ಫಿಲ್ಟ್ರೇಷನ್ ಗ್ಯಾಲರಿ)-ಇವು ಜಿನುಗುವ ನೀರನ್ನು ಶುದ್ಧೀಕರಿಸುತ್ತವೆ.

ಕನತ್ ನೀರಾವಾರಿ ವ್ಯವಸ್ಥೆ ಇರಾನಿನಲ್ಲಿ ಬಲು ಹೆಚ್ಚಾಗಿ ಬಳಕೆಯಲ್ಲಿವೆ. ಇವುಗಳ ನಿರ್ಮಾಣ. ಮೇಲ್ವಿಚಾರಣೆ ಮತ್ತು ವ್ಯವಸ್ಥೆಗಳು ಹೆಚ್ಚು ಖರ್ಚಿನವಾದ್ದರಿಂದ ಸಾಮಾನ್ಯ ರೈತರಿಗೆ ಇವು ಸೂಕ್ತವಲ್ಲ. ಆ ದೇಶದ ಸಿರಿವಂತ ಜಮೀನುದಾರರು ಮಾತ್ರ ಈ ನೀರಾವರಿ ವ್ಯವಸ್ಥೆಯನ್ನು ನಿರ್ಮಿಸಿಕೊಂಡಿದ್ದಾರೆ. ದಕ್ಷಿಣ ಅಮೆರಿಕ ಮತ್ತು ಉತ್ತರ ಆಫ್ರಿಕಗಳಲ್ಲಿಯೂ ಕನತ್ ನೀರಾವರಿ ವ್ಯವಸ್ಥೆ ಇದೆ. ಮರ್ರಕೊಚ್ ಓಯಸಿಸುಗಳಲ್ಲಿ ಇವು ಮೂಲಭೂತ ಪ್ರಾಮುಖ್ಯ ಪಡೆದಿವೆ. ಅಲ್ಲಿ ನಗರಗಳಿಗೆ ನೀರಿನ ಸರಬರಾಜನ್ನು ಇದೇ ರೀತಿಯ ನೀರಾವರಿ ವ್ಯವಸ್ಥೆಯಿಂದ ಮಾಡುತ್ತಿದ್ದಾರೆ.             (ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ